ಮಧುಗಿರಿ: ಸೆಪ್ಟೆಂಬರ್ 5ರಂದು ಕೊನೆಯ ಶ್ರಾವಣ ಶನಿವಾರದ ಅಂಗವಾಗಿ ಮಧುಗಿರಿ ನಗರದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ತಿರುಪತಿಯ ಮಾದರಿಯಲ್ಲಿ ಅನ್ನಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಿಗ್ಗೆ 11 ಗಂಟೆಯಿಂದ ನಡೆಯಲಿರುವ ಈ ದಾಸೋಹ ಕಾರ್ಯಕ್ರಮವನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಹಾಗೂ ದಾಸಪ್ಪನವರ ಸಹಕಾರದೊಂದಿಗೆ ಆರಂಭಿಸಲಾಗುವುದು ಎಂದು ಭಕ್ತ ಮಂಡಳಿಯವರು ತಿಳಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಪರವಾಗಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಲೋಕಕಲ್ಯಾಣಾರ್ಥ ಹಾಗೂ ನಾಡಿನಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿ ಆಯೋಜಿಸಲಾಗುತ್ತಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಭಕ್ತ ಮಂಡಳಿಯವರು ಮನವಿ ಮಾಡಿದ್ದಾರೆ.
ಅಲ್ಲದೆ, ಭಕ್ತರು ತಮ್ಮ ತನು, ಮನ, ಧನ ಹಾಗೂ ವಸ್ತು ರೂಪದಲ್ಲಿ ಸಹಕಾರ ನೀಡುವ ಮೂಲಕ ಅನ್ನದಾಸೋಹ ಕಾರ್ಯಕ್ರಮ ಯಶಸ್ವಿಯಾಗಲು ಕೈಜೋಡಿಸುವಂತೆ ವಿನಂತಿಸಿದ್ದಾರೆ.